ಜ್ವರವಿರಾಮಸ್ಥಿತಿ

ಬಂದ ಜ್ವರ ಇಳಿದು ದೇಹೋಷ್ಣತೆ ಸಹಜ ಸ್ಥಿತಿಗೆ ವಾಪಸು ಬಂದಿರುವ ಸ್ಥಿತಿ (ಏಪೈರೆಕ್ಸಿಯ). ಆರೋಗ್ಯಸ್ಥಿತಿಯಲ್ಲಿ ಜ್ವರವಿರುವುದಿಲ್ಲ; ಆದರೆ ಇದಕ್ಕೆ ಜ್ವರವಿರಾಮಸ್ಥಿತಿ ಎಂಬ ಪದವನ್ನು ಬಳಸುವುದಿಲ್ಲ. ಜ್ವರ ಕ್ರಮೇಣ ಇಳಿಯಬಹುದು (ಲೈಸಿಸ್) ಇಲ್ಲವೇ ಹಠಾತ್ತಾಗಿ ಇಳಿಯಬಹುದು (ಕ್ರೈಸಿಸ್). ಜ್ವರವು ಹಠಾತ್ ಇಳಿತದಲ್ಲಿ ಬಹು ವೇಳೆ ದೇಹ ತಲ್ಲಣಿಸಿ ಕಳವಳವನ್ನು ಉಂಟುಮಾಡಬಹುದು. ಬಿಟ್ಟು ಬಿಟ್ಟು ಪುನಃ ಬರುವ ಜ್ವರಗಳಲ್ಲಿ ಅಂದರೆ ವಾಯ್ದೆ ಜ್ವರಗಳಲ್ಲಿ ಎರಡು ಜ್ವರಕಾಲಗಳ ನಡುವಿನ ಜ್ವರರಹಿತ ಕಾಲವೇ ಜ್ವರವಿರಾಮಸ್ಥಿತಿ ಎನ್ನುವುದು ಸ್ಪಷ್ಟ. ಮಲೇರಿಯ, ಮಾಲ್ಟಜ್ವರ, ಮರುಕಳಿಸುವ ಜ್ವರ (ರಿಲಾಪ್ಸಿಂಗ್ ಫೀವರ್) ಇಂಥ ರೋಗಾಣುಕೃತಜ್ವರಗಳಲ್ಲಿ ಒಮ್ಮೆ ಜ್ವರ ಬರುವುದು, ಮತ್ತೆ ಅದು ಬಿಟ್ಟು ಪುನಃ ಬರುವುದು. ಈ ರೀತಿ ಪದೇ ಪದೇ ಉಂಟಾಗುತ್ತದೆ. ಮಲೇರಿಯದಲ್ಲಿ ಅಂತರ ಒಂದು ಇಲ್ಲವೆ ಎರಡು ದಿವಸ ಇರುವುದು. ಮಾಲ್ಟಜ್ವರ ಮರುಕಳಿಸುವ ಜ್ವರಗಳಲ್ಲಿ ಅಂತರ 5-10 ದಿವಸಗಳಿರಬಹುದು. ನಿರ್ದಿಷ್ಟ ಚಿಕಿತ್ಸೆ ಒದಗದಿದ್ದರೆ ಈ ರೀತಿ ಪದೇ ಪದೇ ಬಿಡುವಿನ ಹಾಗೂ ಜ್ವರ ಕಾಲಗಳು ತಿಂಗಳುಗಟ್ಟಲೆ ವ್ಯಕ್ತವಾಗುತ್ತವೆ. ದಡಾರ, ಡೆಂಗೆ ಮುಂತಾದ ಜ್ವರಯುಕ್ತರೋಗಗಳಲ್ಲೂ ರೋಗಗಳಲ್ಲಿ ಒಂದು ಸಾರಿ ಜ್ವರವಿರಾಮಸ್ಥಿತಿ ಕಂಡುಬರುತ್ತದೆ. ಅಂದರೆ ಈ ರೋಗಗಳಲ್ಲಿ ಜ್ವರ ಬಂದು ಅದು ಬಿಟ್ಟು ಇನ್ನೊಂದು ಸಲ ಬಂದು ರೋಗವಾಸಿಯಾಗುವವರೆಗೂ ಇರುವುದು (ನೋಡಿ_ ಜ್ವರ). ಟೈಫಾಯಿಡ್ ಜ್ವರದಲ್ಲಿ ಕೆಲವು ವೇಳೆ ಜ್ವರ ನಿಂತು ಹಲವು ದಿವಸಗಳಾದ ಮೇಲೆ ಜ್ವರ ಮರುಕಳಿಸುವುದುಂಟು. ಆದರೆ ಜ್ವರವಿರದ ಈ ಅಂತರವನ್ನು ಜ್ವರರಹಿತ ಕಾಲ ಎಂದು ಪರಿಗಣಿಸುವುದು ರೂಢಿಯಲ್ಲಿಲ್ಲ. ಕಾರಣ ಇದು ಮಾಮೂಲಾಗಿ ಪ್ರತಿ ಟೈಫಾಯಿಡ್ ರೋಗಿಯಲ್ಲೂ ಕಂಡುಬರದೆ ಅಪರೂಪವಾಗಿ ಒಬ್ಬೊಬ್ಬರಲ್ಲಿ ಕಂಡುಬರುವ ಪ್ರಸಂಗ. ಜ್ವರ ಮರುಕಳಿಸುವುದರಿಂದ ಜ್ವರವಿರಾಮಸ್ಥಿತಿ ಸೋಂಕು ಹರಿಯದೆ

ಮುಂದುವರಿಯತ್ತಿರುವುದು ವ್ಯಕ್ತ. ಆದರೆ ಈ ಕಾಲದಲ್ಲಿ ಜ್ವರವಿರಾಮಸ್ಥಿತಿಯಲ್ಲಿಯೇ ಅಲ್ಲದೆ ವ್ಯಕ್ತಿ ಹೆಚ್ಚು ಕಡಿಮೆ ಆರೋಗ್ಯವಾಗಿಯೇ ಇರಬಹುದು.
(ಪಿ.ಎಸ್.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ